ಪಾಂಡವಪುರ -
ಮಂಡ್ಯ ಜಿಲ್ಲೆಯ ಒಂದು ತಾಲ್ಲೂಕು. ಉಪವಿಭಾಗ; ಆ ತಾಲ್ಲೂಕಿನ ಮತ್ತು ಉಪವಿಭಾಗದ ಮುಖ್ಯಸ್ಥಳ. ಉಪವಿಭಾಗದಲ್ಲಿ ಪಾಂಡವಪುರ, ಕೃಷ್ಣರಾಜಪೇಟೆ, ನಾಗಮಂಗಲ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳಿವೆ. ಪಾಂಡವಪುರ ತಾಲ್ಲೂಕಿನ ಉತ್ತರದಲ್ಲಿ ನಾಗಮಂಗಲ, ಪೂರ್ವದಲ್ಲಿ ಮಂಡ್ಯ, ಆಗ್ನೇಯದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕುಗಳೂ ದಕ್ಷಿಣದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಮತ್ತು ಕೃಷ್ಣರಾಜ ಸಾಗರವೂ ಇವೆ. ಪಾಂಡವಪುರ ತಾಲ್ಲೂಕಿನಲ್ಲಿರುವ ಹೋಬಳಿಗಳು ಪಾಂಡವಪುರ, ಮೇಲುಕೋಟೆ ಮತ್ತು ಚಿನಕುರಳಿ, ಗ್ರಾಮಗಳ ಸಂಖ್ಯೆ 175. ತಾಲ್ಲೂಕಿನ ವಿಸ್ತೀರ್ಣ 533 ಚ.ಕಿಮೀ. ತಾಲ್ಲೂಕು ಜನಸಂಖ್ಯೆ 1,75,008 (2001). 

ತಾಲ್ಲೂಕಿನ ಮೇಲ್ಮೈ ಅಲೆಯಲೆಯಾಗಿ ಏರಿಳಿಯುತ್ತದೆ. ಇದರ ಉತ್ತರ ಪೂರ್ವಭಾಗಗಳಲ್ಲಿ ಗ್ರಾನೈಟ್ ಶಿಲೆಗಳ ಬೆಟ್ಟಗಳಿವೆ. ತಾಲ್ಲೂಕಿನ ಅತ್ಯಂತ ಎತ್ತರದ ಬೆಟ್ಟ ಮೇಲುಕೋಟೆ (1,094 ಮೀ). ತಾಲ್ಲೂಕಿನ ಮುಖ್ಯ ನದಿ ಲೋಕಪಾವನಿ. ಇದು ತಾಲ್ಲೂಕಿನಲ್ಲಿ ದಕ್ಷಿಣಾಭಿಮುಖವಾಗಿ ಹರಿದು, ನೆರೆಯ ತಾಲ್ಲೂಕಾದ ಶ್ರೀರಂಗಪಟ್ಟಣದಲ್ಲಿ ಕಾವೇರಿಯನ್ನು ಸೇರುತ್ತವೆ. ಇಲ್ಲಿಯ ಮಣ್ಣು ಗ್ರಾನೈಟ್ ಮತ್ತು ನೀಸ್ ಶಿಲೆಗಳಿಂದ ಆದ್ದು. ಇದು ಕೆಂಪು ಜೇಡಿ ಹಾಗೂ ಮರಳುಮಿಶ್ರಿತ ಮಣ್ಣಿನಿಂದ ಕೂಡಿದೆ.

ಪಾಂಡವಪುರದಲ್ಲಿ ಏಪ್ರಿಲ್‍ನಿಂದ ನವೆಂಬರ್ ವರೆಗಿನ ಅವಧಿಯಲ್ಲಿ ಮಳೆಯಾಗುತ್ತದೆ. ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಹೆಚ್ಚು ಮಳೆ; ಅಕ್ಟೋಬರಿನಲ್ಲಿ ಗರಿಷ್ಠ. ವಾರ್ಷಿಕ ಪ್ರಸಾಮಾನ್ಯ ಮಳೆ 600.71 ಮಿಮೀ. ಮಾರ್ಚ್‍ನಿಂದ ಮೇ ವರೆಗೆ ಉಷ್ಣತೆ ಏರುತ್ತ ಸಾಗುತ್ತದೆ. ಮಳೆಯೊಂದಿಗೆ ತಂಪು ಬರುತ್ತದೆ. ಮಳೆಗಾಲದ ಅನಂತರ ಉಷ್ಣತೆ ತಗ್ಗತೊಡಗುತ್ತದೆ. ತಾಲ್ಲೂಕಿನ ಅತ್ಯಂತ ಚಳಿ ತಿಂಗಳು ಡಿಸೆಂಬರ್. ತಾಲ್ಲೂಕಿನಲ್ಲಿ ಕಾಡು ಹೆಚ್ಚಾಗಿಲ್ಲ. ತಾಲ್ಲೂಕಿನ ಪಶ್ಚಿಮಭಾಗದಲ್ಲಿ ಅಲ್ಲಲ್ಲಿ ತೆಳುವಾದ ಸಸ್ಯವರ್ಗವಿದೆ. ಬೆಟ್ಟದ ಬಂಡೆಗಳ ಮಧ್ಯದಲ್ಲಿ ಮಣ್ಣಿರುವ ಭಾಗದಲ್ಲಿ ಕಾಡುಗಳಿವೆ. ಜಾಲಿ, ಅಳಲೆ, ದಿಂಡಗ, ಚುಜ್ಜಲು, ಚನ್ನಂಗಿ, ನವಿಲಡಿ, ಬೂರುಗ, ಹೊಂಗೆ, ಬಿಳಿಮತ್ತಿ, ಹುಣಿಸೆ, ಅಳಲೆ ಇವು ಕಾಡುಗಳಲ್ಲಿರುವ ಮರಗಳು,  ಜೇನುತುಪ್ಪ, ಮೇಣ, ತುಪ್ಪ ಕಕ್ಕೆಯ ತೊಗಟೆ, ಗುಗ್ಗುಳ ಇವು ಮುಖ್ಯ ಉತ್ಪನ್ನಗಳು. ಈ ತಾಲ್ಲೂಕಿನಲ್ಲಿ ವನ್ಯಮೃಗಗಳು ವಿಪುಲವಾಗಿಲ್ಲ. ಕಾಡುಹಂದಿ, ಮುಳ್ಳುಹಂದಿ, ಜಿಂಕೆ, ಮೊಲ, ಕಾಡುನಾಯಿ, ನರಿ ಮೊದಲಾದ ಪ್ರಾಣಿಗಳು ಅಲ್ಲಲ್ಲಿ ಇವೆ.

ಬೇಸಾಯವೇ ಈ ತಾಲ್ಲೂಕಿನ ಜನರ ಮುಖ್ಯ ಕಸುಬು. ಕೃಷ್ಣರಾಜಸಾಗರದಿಂದ ತೋಡಿರುವ ವಿಶ್ವೇಶ್ವರಯ್ಯ ನಾಲೆಯಿಂದಲೂ ಲೋಕಪಾವನಿ ನದಿಯಿಂದಲೂ ಕೆರೆಗಳಿಂದಲೂ ತಾಲ್ಲೂಕಿನ ಹೆಚ್ಚು ಭಾಗಕ್ಕೆ ನೀರಾವರಿ ಸೌಲಭ್ಯ ದೊರಕಿದೆ.  ತಾಲ್ಲೂಕಿನ ಉತ್ತರ ಮತ್ತು ಪೂರ್ವ ಭಾಗದ ಕೆಲವು ಭಾಗಗಳಿಗೆ ಕೆರೆಕುಂಟೆಗಳು ಮತ್ತು ಸಣ್ಣ ತೊರೆಗಳೇ ನೀರಾವರಿ ಮೂಲಗಳು. ನಾಲೆ ನೀರಾವರಿ ಪ್ರದೇಶದಲ್ಲಿ ಸಾಮಾನ್ಯವಾಗಿ ವರ್ಷಕ್ಕೆ ಬತ್ತದ ಎರಡು ಬೆಳೆ ಬೆಳೆಯುತ್ತಾರೆ. ಕಬ್ಬು ಇಲ್ಲಿಯ ಮುಖ್ಯ ವಾಣಿಜ್ಯ ಬೆಳೆ, ಬತ್ತ, ಕಬ್ಬು ಅಲ್ಲದೆ ರಾಗಿ, ಜೋಳ, ಹುರುಳಿ, ನೆಲಗಡಲೆ, ಮೆಣಸಿನಕಾಯಿ, ಆಲೂಗೆಡ್ಡೆ, ಸಂಬಾರ, ದ್ವಿದಳ ಧಾನ್ಯ ಇವೂ ಇಲ್ಲಿ ಬೆಳೆಯುತ್ತವೆ. 

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಇಲ್ಲಿಯ ಮುಖ್ಯ ಕೈಗಾರಿಕೆ. ಇಲ್ಲಿ ಬತ್ತದ ಗಿರಣಿಗಳೂ ಇವೆ. ಕೈಮಗ್ಗ, ಬೆಲ್ಲ ತಯಾರಿಕೆ, ವ್ಯವಸಾಯೋಪಕರಣಗಳ ಕೈಗಾರಿಕೆ, ಮರಗೆಲಸ, ಕಮ್ಮಾರಿಕೆ ಇವು ಇತರ ಉದ್ಯಮಗಳು.
ಈ ತಾಲ್ಲೂಕಿನ ಮೂಲಕ ಪಾಂಡವಪುರ ಪಟ್ಟಣಕ್ಕೆ ಸಮೀಪದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಹಾದುಹೋಗುತ್ತದೆ. ಪಾಂಡವಪುರ-ನೆಲ್ಲಿಗೆರೆ ರಸ್ತೆ ನಾಗಮಂಗಲದ ಮೂಲಕ ತುಮಕೂರು ಜಿಲ್ಲೆಯೊಂದಿಗೆ ಸಂಪರ್ಕಕಲ್ಪಿಸುತ್ತದೆ. ಪಾಂಡವಪುರ-ಚಿನಕುರಳಿ-ಕೃಷ್ಣರಾಜಪೇಟೆ-ಚನ್ನರಾಯಪಟ್ಟಣ, ಚಿನಕುರಳಿ-ಮೇಲುಕೋಟೆ, ಪಾಂಡವಪುರ-ಕೃಷ್ಣರಾಜಸಾಗರ ಇತರ ಮುಖ್ಯ ಮಾರ್ಗಗಳು. ಬೆಂಗಳೂರು-ಮೈಸೂರು ರೈಲುಮಾರ್ಗದ ಮೇಲೆ ಪಾಂಡವಪುರ ಒಂದು ನಿಲ್ದಾಣ.
ಪಾಂಡವಪುರದಲ್ಲಿ ಪ್ರತಿ ಗುರುವಾರ ಸಂತೆ ನಡೆಯುತ್ತದೆ. ಕ್ಯಾತನಹಳ್ಳಿ ಸಂತೆ ಮಂಗಳವಾರ. ಪಾಂಡವಪುರ ಮತ್ತು ಮೇಲುಕೋಟೆಗಳಲ್ಲಿ ನಡೆಯುವ ವಾರ್ಷಿಕ ಜಾತ್ರೆಗಳು ವ್ಯಾಪಾರ ದೃಷ್ಟಿಯಿಂದಲೂ ಮುಖ್ಯವಾದವು. ರೈತರಿಗೆ ಸಾಲ ಒದಗಿಸುವ ಅನೇಕ ಸಹಕಾರಿ ಸಂಘಗಳು ಗ್ರಾಮಪ್ರದೇಶಗಳಲ್ಲಿ ಸ್ಥಾಪಿತವಾಗಿವೆ. ಪಾಂಡವಪುರದಲ್ಲಿರುವ ವಾಣಿಜ್ಯ ಬ್ಯಾಂಕು ಶಾಖೆಗಳು, ಭೂ ಅಭಿವೃದ್ಧಿ ಬ್ಯಾಂಕುಗಳು ವ್ಯವಹಾರಕ್ಕೆ ಅನುಕೂಲ ಕಲ್ಪಿಸಿವೆ. ಕ್ಯಾತನಹಳ್ಳಿ ಮತ್ತು ಚಿನಕುರುಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳುಂಟು.

ಪಾಂಡಪುರ ತಾಲ್ಲೂಕಿನಲ್ಲಿ ಒಂದು ಜೂನಿಯರ್ ಕಾಲೇಜು, ಮೂಲಶಿಕ್ಷಣ ಶಾಲೆಗಳು, ಪ್ರೌಢಶಾಲೆಗಳು, ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳು ಇವೆ.  ಪ್ರಾಥಮಿಕ ಶಾಲೆಗಳು ಮುಖ್ಯ ಊರುಗಳಲ್ಲೆಲ್ಲ ಇವೆ.
ಪಾಂಡವಪುರ ತಾಲ್ಲೂಕು ಹಿಂದೆ ಮೈಸೂರು ಜಿಲ್ಲೆಯ ಭಾಗವಾಗಿತ್ತು. 1882ರಲ್ಲಿ ಫ್ರೆಂಚ್ ರಾಕ್ಸ್ ಎಂಬ ಉಪವಿಭಾಗದ ರಚನೆಯಾಯಿತು. ಅನಂತರ ಇದು ಉಪತಾಲ್ಲೂಕಾಗಿತ್ತು. 1923ರಲ್ಲಿ ಇದನ್ನು ರದ್ದು ಮಾಡಲಾಯಿತು. ಕಸಬಾ ಹೋಬಳಿ ಶ್ರೀರಂಗಪಟ್ಟಣ ತಾಲ್ಲೂಕಿಗೆ ಸೇರಿತು. 1937ರಲ್ಲಿ ಹಿರೋಡೆ, ಮೇಲುಕೋಟೆ ಮತ್ತು ಚಿನಕುರಳಿ ಹೋಬಳಿಗಳಿಂದ ಕೂಡಿದ ಫ್ರೆಂಚ್ ರಾಕ್ಸ್ ತಾಲ್ಲೂಕು ಅಸ್ತಿತ್ವಕ್ಕೆ ಬಂತು. 1939ರಲ್ಲಿ ಹಳೆಯ ಮೈಸೂರು ಜಿಲ್ಲೆಯನ್ನು ಒಡೆದು ಮಂಡ್ಯ ಜಿಲ್ಲೆಯನ್ನು ರಚಿಸಿದಾಗ ಇದು ಆ ಜಿಲ್ಲೆಗೆ ಸೇರಿತು.

ತಾಲ್ಲೂಕಿನಲ್ಲಿ ಪಾಂಡವಪುರ ಮತ್ತು ಮೇಲುಕೋಟೆ ಇವು ಪಟ್ಟಣಗಳು. ತಾಲ್ಲೂಕಿನ ಹಾಗೂ ಉಪವಿಭಾಗದ ಮುಖ್ಯಪಟ್ಟಣ ಪಾಂಡವಪುರ. ಇದು ಬೆಂಗಳೂರು-ಮೈಸೂರು ರಸ್ತೆಗೆ ಉತ್ತರದಲ್ಲಿ 6 ಕಿಮೀ. ದೂರದಲ್ಲಿದೆ. ಮೈಸೂರಿನಿಂದ ಇಲ್ಲಿಗೆ 24 ಕಿಮೀ. ದೂರ ಜನಸಂಖ್ಯೆ 18,236 (2001). ಪಾಂಡವಪುರಕ್ಕೆ ಹಿಂದೆ ಹಿರೋಡೆ, ಫ್ರೆಂಚ್ ರಾಕ್ಸ್ ಎಂಬ ಹೆಸರುಗಳಿದ್ದುವು. ಹೈದರ್ ಅಲಿ ಮತ್ತು ಟೀಪು ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಇದರ ಬಳಿಯಲ್ಲಿ ಫ್ರೆಂಚ್ ಅಧಿಕಾರಿಗಳು ಬೀಡು ಬಿಟ್ಟಿದ್ದುದರಿಂದ ಇದಕ್ಕೆ ಫ್ರೆಂಚ್ ರಾಕ್ಸ್ ಎಂಬ ಹೆಸರು ಬಂದಿತ್ತು.  ಪಾಂಡವರು ವನವಾಸದ ಕಾಲದಲ್ಲಿ ಇಲ್ಲಿ ಬಂದಿದ್ದರೆಂದು ಐತಿಹ್ಯವುಂಟು. ಊರಿನ ಬಳಿ ಅವಳಿ ಬೆಟ್ಟಗಳ ಎಡೆಯಲ್ಲಿ ಬಕಾಸುರ ವಾಸವಾಗಿದ್ದನೆಂದೂ ಅವನಿಗೆ ಈ ಊರಿನವರು ದೊಡ್ಡ ಎಡೆ ಇಡುತ್ತಿದ್ದರಿಂದ ಇದಕ್ಕೆ ಹಿರಿಯ ಎಡೆ ಅಥವಾ ಹಿರೋಡೆ ಎಂಬ ಹೆಸರು ಬಂದಿತ್ತೆಂದೂ ಹೇಳಲಾಗಿದೆ. ಈ ಅವಳಿ ಬೆಟ್ಟಗಳಲ್ಲಿ ಮೂಡಲಬೆಟ್ಟವನ್ನು ಭೀಮನಬೆಟ್ಟವೆಂದೂ ಪಡುವಲ ಬೆಟ್ಟವನ್ನು ಕುಂತಿಬೆಟ್ಟವೆಂದೂ ಕರೆಯುತ್ತಾರೆ. ಪಾಂಡವಪುರದಲ್ಲಿ ನವಶಿಲಾಯುಗದ ಅವಶೇಷಗಳು ಸಿಕ್ಕಿವೆ. 

ಪಾಂಡವಪುರಕ್ಕೆ ಪೌರಸಭೆ ಇದೆ. ಪಾಂಡವಪುರ ಪಟ್ಟಣ ರೈಲುನಿಲ್ದಾಣ ಮತ್ತು ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (1959) ಪ್ರದೇಶಗಳನ್ನೊಳಗೊಂಡಿದೆ. ಈ ಊರಿನಲ್ಲಿ ಜೂನಿಯರ್ ಕಾಲೇಜು ಮತ್ತು ಪ್ರೌಢಶಾಲೆಗಳಿವೆ. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆ ಮತ್ತು ಪಶುವೈದ್ಯ ಕೇಂದ್ರಗಳಿವೆ. ಇಲ್ಲಿ ಬೀಬಿ (ಮಹದೇಶ್ವರಸ್ವಾಮಿ) ಜಾತ್ರೆ ಮೂರು ದಿನಗಳ ಕಾಲ ನಡೆಯುತ್ತದೆ.

ಮೇಲುಕೋಟೆ ಮತ್ತು ತೊಂಡನೂರು ಇವು ಈ ತಾಲ್ಲೂಕಿನ ಎರಡು ಇತಿಹಾಸ ಪ್ರಸಿದ್ಧ ಹಾಗೂ ಧಾರ್ಮಿಕ ಕ್ಷೇತ್ರಗಳು. ತೊಂಡನೂರಿನಲ್ಲೂ ಮೇಲುಕೋಟೆಯಲ್ಲೂ ಶ್ರೀರಾಮಾನುಜಾಚಾರ್ಯರು ನೆಲೆಸಿದ್ದರು. ಮೇಲುಕೋಟೆಯ ತಿರುನಾರಾಯಣ ದೇವಸ್ಥಾನ ಪ್ರತಿವರ್ಷವೂ ಅಧಿಕ ಸಂಖ್ಯೆಯಲ್ಲಿ ಯಾತ್ರಿಕರನ್ನು ಆಕರ್ಷಿಸುತ್ತದೆ.  ಅಲ್ಲಿಯ ವೈರಮುಡಿ ಉತ್ಸವ ಪ್ರಸಿದ್ಧವಾದ್ದು. ಚಿನಕುರುಳಿಯಲ್ಲಿ ಆಂಜನೇಯ ದೇವಾಲಯ ಮತ್ತು ಮಾಸ್ತಿ ಗುಡಿಗಳಿವೆ. ಇಲ್ಲಿ ಮರಾಠರಿಗೂ ಹೈದರನಿಗೂ ಘೋರ ಯುದ್ಧ ನಡೆಯಿತು. ಈ ತಾಲ್ಲೂಕಿಗೆ ಸೇರಿದ್ದು, ಈಗ ಕೃಷ್ಣರಾಜಸಾಗರ ಜಲಾಶಯದಲ್ಲಿ ಮುಳುಗಡೆಯಾಗಿರುವ ಕನ್ನಂಬಾಡಿ ಇತಿಹಾಸ ಪ್ರಸಿದ್ಧ ಊರು. ಇಲ್ಲಿ ಕಣ್ವ ಋಷಿಗಳು ತಪಸ್ಸು ಮಾಡುತ್ತಿದ್ದರೆಂದೂ ಈ ಊರಿಗೆ ಕಣ್ವಪುರಿ ಎಂಬ ಹೆಸರಿತ್ತೆಂದೂ ಹೇಳಲಾಗಿದೆ. ಇಲ್ಲಿ ಕಾಳಿಕಾದೇವಿಯ ಆಲಯವಿತ್ತು. ತಾಲ್ಲೂಕಿನಲ್ಲಿ ಕ್ಯಾತನಹಳ್ಳಿ, ಬೆಳ್ಳಾವೆ, ಚಿಕ್ಕಾಡೆ, ಹಿರಿಮರಳಿ, ಗಮ್ಮನಹಳ್ಳಿ, ಕಟ್ಟೀರಿ, ಬಸ್ತಿಹಳ್ಳಿ, ಅರಳಕುಪ್ಪೆ, ಸಂಕನಹಳ್ಳಿ ಮೊದಲಾದ ದೊಡ್ಡ ಊರುಗಳಿವೆ.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ